ಗಾತ್ರದಲ್ಲಿ, ಪಾತ್ರಗಳಮಟ್ಟದಲ್ಲಿ, ವರ್ಣನೆಯ ವಿಸ್ತಾರದಲ್ಲಿ, ರಸವೈವಿಧ್ಯದಲ್ಲಿ, ಶೈಲಿಯ ಪರಿಷ್ಕಾರದಲ್ಲಿ, ಮಹತ್ತಾದುದು ಮಹಾಕಾವ್ಯ ಎನಿಸಿದರೆ ಲಘುವಾದುದೇ ಲಘುಕಾವ್ಯ. ಲೌಕಿಕ ಪ್ರಣಯದ ಸಹಜ ಪ್ರಕಟಣೆ, ಪ್ರಕೃತಿಯ ವಿವಿಧ ರೂಪಗಳ ವರ್ಣನೆ, ಲೌಕಿಕ ಜನವ್ಯವಹಾರದ ವಿಡಂಬನೆ, ನೀತಿ ಮತ್ತು ವೈರಾಗ್ಯ ಪರವಾದ ಭಾವಗಳ ಅಭಿವ್ಯಕ್ತಿ, ಭಕ್ತಿಭಾವನೆಯ ಆವಿಷ್ಕಾರ ಇತ್ಯಾದಿ ಹಲವು ಮುಖಗಳಿಂದ ಸಂಸ್ಕೃತ ‘ಲಘುಕಾವ್ಯ’ ಕೃಷಿಗೊಂಡು ಸಾವಿರಾರು ಸುಂದರ ರಚನೆಗಳಿಂದ ಬಂಧುರವಾಗಿದೆ. ಸಂಸ್ಕೃತ ಲಾಕ್ಷಣಿಕರು ಇವನ್ನು ಖಂಡಕಾವ್ಯವೆಂದು ಸ್ಥೂಲವಾಗಿ ಹೆಸರಿಸಿ ಮುಕ್ತಕ, ಕುಲಕ, ಸಂದಾನಿತಕ ಇತ್ಯಾದಿ ಭೇದಗಳನ್ನು ಕಲ್ಪಿಸುತ್ತಾರೆ. ಒಂದು ಭಾವದ ಪೂರ್ಣ ಅಭಿವ್ಯಕ್ತಿ ಒಂದೇ ಸ್ವತಂತ್ರ ಬಿಡಿ ಪದ್ಯದಲ್ಲಿ ಆಗುತ್ತಿದ್ದರೆ ಮುಕ್ತಕ, ಕೆಲವೇ ಪದ್ಯಗಳಲ್ಲಿ ಆಗುತ್ತಿದ್ದರೆ ಕುಲಕ. ಇನ್ನೂ ಹೆಚ್ಚಾದ, ಆದರೆ ನೂರಕ್ಕೆ ಮೀರದ, ಪದ್ಯಗಳಲ್ಲಿ ಆಗುತ್ತಿದ್ದರೆ ಸಂದಾನಿತಕ. ಪದ್ಯಸಂಖ್ಯೆಯನ್ನು ಆಧರಿಸಿ ಷಟ್ಕ, ಅಷ್ಟಕ, ಪಂಚಾಶಿಕಾ, ಶತಕ ಮುಂತಾದ ಹೆಸರುಗಳೂ ರೂಢವಾಗಿವೆ. ಪ್ರಸಿದ್ಧರಾದ ಕಾಳಿದಾಸಾದಿ ಮಹಾಕವಿಗಳೇ ಉತ್ತಮ ಲಘುಕಾವ್ಯಗಳನ್ನು ಬರೆದ ಉದಾಹರಣೆಗಳಿವೆ. ಆದರೆ ಅಪ್ರಸಿದ್ಧರಾದ, ಅಜ್ಞಾತನಾಮರಾದ, ಸಾವಿರಾರು ಲಘುಕವಿಗಳ, ಕವಯಿತ್ರಿಯರ ರಚನೆಗಳನ್ನು ಪೂರ್ವದ ಸುಭಾಷಿತ ಸಂಗ್ರಹಗಳಲ್ಲಿ ನೋಡುತ್ತೇವೆ. ಹೀಗೆ ಸಂಸ್ಕೃತ ಲಘುಕಾವ್ಯದ ವ್ಯಾಪ್ತಿ ದೊಡ್ಡದು; ಅದರ ಸ್ವಾರಸ್ಯವೂ ಹೆಚ್ಚಿನದು. ಮಾನವ ಹೃದಯದಲ್ಲಿ ಮೂಡಿ ಮಾಯವಾಗುವ ಭಾವತರಂಗಗಳೇ ಲಘುಕಾವ್ಯದ ಮುಖ್ಯ ವಸ್ತುವೆನ್ನಬಹುದು. ಕಾಲಕಾಲಕ್ಕೆ ಬದಲಾಗುವ ಇತರ ಕಲ್ಪನೆಗಳಂತೆ ಹೃದಯಾಂತರಾಳದ ಮೂಲಪರಿಸ್ಪಂದನಗಳು ಬದಲಾಗುವ ಪ್ರಯುಕ್ತ, ಭಾವಕಾವ್ಯಗಳ ಆಕರ್ಷಣೆ ಎಂದೆಂದಿಗೂ ಏಕರೀತಿಯಾಗಿಯೇ ಇರುತ್ತದೆ.

‘ಲಘುಕಾವ್ಯ’ ರಚನೆಯ ಸಂಪ್ರದಾಯ ಎಷ್ಟು ಹಳೆಯದೆಂಬುದನ್ನು ತೀರ್ಮಾನಿಸುವುದು ಕಷ್ಟ. ಏಕೆಂದರೆ ಪೂರ್ವರಚನೆಗಳಲ್ಲಿ ಬಹುಭಾಗ ಇಂದು ಲುಪ್ತವಾಗಿದೆ. ‘ವರತನು ಸಂಪ್ರವದಂತಿ ಕುಕ್ಕುಟಾಃ’ ಎಂದು ಮುಂತಾದ ಶೃಂಗಾರಗೀತೆಗಳು ಪತಂಜಲಿ ಮಹಾಭಾಷ್ಯದಲ್ಲೇ ಉದಾಹೃತವಾಗಿವೆ. ಮುಂದೆ ಭರ್ತೃಹರಿಯ ಶತಕಗಳಲ್ಲಿ ಸೇರಿಕೊಂಡಿರುವ ಕೆಲವೊಂದು ಮುಕ್ತಕಗಳು ಅಶ್ವಘೋಷನ ‘ಬುದ್ಧಚರಿತೆ’ಯಲ್ಲಿಯೇ ಸಿಕ್ಕುತ್ತವೆ. ಭಾಸಾದಿ ಪ್ರಾಚೀನ ಸಂಸ್ಕೃತ ನಾಟಕಕಾರರು ತಮ್ಮ ನಾಟಕಗಳಲ್ಲಿ ಉತ್ತಮ ಪ್ರಣಯಗೀತೆಗಳನ್ನೂ  ಪ್ರಕೃತಿಗೀತೆಗಳನ್ನೂ  ಬರೆದಿದ್ದಾರೆ. ಪ್ರಾಕೃತಕಾವ್ಯದ ಆದಿಸಂಕಲನವೆನ್ನಬಹುದಾದ ‘ಸಪ್ತಶತಿ’ಯು ಈ ಕಾವ್ಯಸಂಪ್ರದಾಯ ಜನಪದ ಕವಿಗಳಲ್ಲಿ ರೂಢಮೂಲವಾಗಿದ್ದುದನ್ನೇ ತೋರಿಸುತ್ತದೆ. ಛಂದಶ್ಶಾಸ್ತ್ರ, ಕಾಮಶಾಸ್ತ್ರ, ನಾಟ್ಯಶಾಸ್ತ್ರಗಳಲ್ಲಿ ಅನೇಕ ಅಂಶಗಳು ಈ ಬಗೆಯ ರಚನೆಗಳಿದ್ದುದನ್ನು ಸೂಚಿಸುತ್ತವೆ. ಮಂಜುಭಾಷಿಣೀ, ವಸಂತತಿಲಕಾ, ಸ್ರಗ್ಧರಾ ಮುಂತಾದ ವೃತ್ತನಾಮಗಳೇ ಒಂದು ಕಾಲದಲ್ಲಿ ಈ ಛಂದೋಬಂಧಗಳು ಸ್ತ್ರೀವರ್ಣನೆಗಾಗಿ ಉಪಯುಕ್ತವಾಗುತ್ತಿದ್ದುದನ್ನು ಹೇಳುತ್ತವೆ. ಆದುದರಿಂದ ಕ್ರಿಸ್ತಶಕದ ಆರಂಭದ ವೇಳೆಗೆ ಲಘುಕಾವ್ಯದ ಸಂಪ್ರದಾಯ ಅಸ್ತಿತ್ವದಲ್ಲಿ ಬಂದಾಗಿತ್ತೆಂದು ಊಹಿಸಬಹುದಾಗಿದೆ. 

ಆದರೆ ಉಪಲಬ್ಧ ಲಘುಕಾವ್ಯಕರ್ತೃಗಳಲ್ಲಿ ಎಲ್ಲಕ್ಕಿಂತ ಮೊದಲನೆಯ ವನೆಂದರೆ ಕಾಳಿದಾಸನೇ. ಪ್ರಣಯಿಗಳ ಮನೋವೃತ್ತಿಯನ್ನನುಸರಿಸಿ ಗ್ರೀಷ್ಮಾದಿ ಋತುಗಳು ಮೋಹಕವಾಗುವುದನ್ನು ಋತುಸಂಹಾರದಲ್ಲಿ ಹಾಡುವ ಕಾಳಿದಾಸನೇ ಮೇಘಸಂದೇಶದಲ್ಲಿ ವಿಪ್ರಲಂಭ ಶೃಂಗಾರದ ಹೊಳೆಯನ್ನು ಹರಿಸಿದ್ದಾನೆ. ಈ ಎರಡೂ ಕೃತಿಗಳು ಸಂಸ್ಕೃತಕವಿಗಳಿಗೆ ಹೊಸಕಾವ್ಯ ಸಂಪ್ರದಾಯವನ್ನು ತೋರಿಸಿಕೊಟ್ಟವೆನ್ನಬಹುದು. ಅನಂತರ ಘಟಕರ್ಪರ ಕಾವ್ಯ, ಶೃಂಗಾರತಿಲಕ, ಮಯೂರಾಷ್ಟಕ, ರಾಕ್ಷಸಕಾವ್ಯ ಮುಂತಾದ ಮುಕ್ತಕಸಂಗ್ರಹಗಳು ಸಂಭೋಗಶೃಂಗಾರದ ಉನ್ಮಾದವನ್ನು ಉತ್ತಮವಾಗಿ ಪ್ರತಿಬಿಂಬಿಸಿದರೆ, ಪ್ರಣಯಪಯೋಧಿಯ ವಿವಿಧಾವಸ್ಥೆ ಗಳನ್ನು ಶಬ್ದಚಿತ್ರಗಳಲ್ಲಿ ಅಮರವಾಗಿ ಕಡೆದಿಡುವ ಶೃಂಗಾರಶತಕಗಳನ್ನು ಲೋಕಪ್ರಿಯ ಮಹಾಕವಿಗಳಾದ ಭರ್ತೃಹರಿ, ಅಮರುಕ ಮುಂತಾದವರು ರಚಿಸಿ ಕೃತಕೃತ್ಯರಾದರು. ಗೋವರ್ಧನನ ಆರ್ಯಾಸಪ್ತಶತಿಯೆಂಬ ಮಧುರಕೃತಿ ನಾಗರಿಕರ ಪ್ರಣಯದಂತೆ ಹಳ್ಳಿಯ ಜನರ ಪ್ರೇಮವನ್ನು ಮನಮೋಹಕವಾಗಿ ಬಣ್ಣಿಸುವ 200 ಆರ್ಯೆಗಳನ್ನು ಒಳಗೊಂಡಿದೆ. ಸಂದೇಶಕಾವ್ಯವೆಂಬ ಸಂಪ್ರದಾಯವನ್ನು ಶೃಂಗಾರಕವಿಗಳಂತೆ ಧರ್ಮ ಬೋಧಕ ಕವಿಗಳೂ ವಿಸ್ತರಿಸಿದ ಪರಿಣಾಮವಾಗಿ ಒಂದು ಕಡೆ ಪವನದೂತ (ಕವಿ ಧೋಯೀ; 12ನೆಯ ಶತಮಾನ), ಕೋಕಿಲಸಂದೇಶ (ಕವಿ ಉದ್ದಂಡ; ಸು.1400), ಭೃಂಗಸಂದೇಶ (ಕವಿ ವಾಸುದೇವ; 17ನೆಯ ಶತಮಾನ) ಇತ್ಯಾದಿ ಶೃಂಗಾರಭರಿತ ಕಾವ್ಯಗಳು ಹತ್ತಾರು ಬೆಳೆದಂತೆ, ಪಾಶ್ರ್ವಾಭ್ಯುದಯ (ಜಿನಸೇನ; ಸು.814), ನೇಮಿದೂತ (ವಿಕ್ರಮ,  ಅಜ್ಞಾತ), ಹಂಸಸಂದೇಶ (ವೇದಾಂತದೇಶಿಕ; ಸು.1300), ‘ಉದ್ಭವ ಸಂದೇಶ’ (ರೂಪಗೋಸ್ವಾಮಿ; ಸು.1500) ಇತ್ಯಾದಿ ಶಾಂತ ಇಲ್ಲವೆ ಭಕ್ತಿರಸಪ್ರಧಾನವಾದ ಕೃತಿಗಳೂ ಅನೇಕವಾಗಿ ರಚಿತವಾದವು. ಇವೆಲ್ಲಕ್ಕೂ ಕಾಳಿದಾಸನೇ ಪ್ರೇರಣೆ. ಪ್ರಾಯಿಕವಾಗಿ ಇವೆಲ್ಲ ಮೇಘದೂತದ ವೃತ್ತವಾದ ಮಂದಾಕ್ರಾಂತಾ ವೃತ್ತದಲ್ಲೇ ಇವೆ. ‘ಉದ್ಧವದೂತ’ ಶಿಖರಿಣೀ ವೃತ್ತದಲ್ಲಿದ್ದರೆ ಮನೋದೂತ (ವಿಷ್ಣುದಾಸ; ಅಜ್ಞಾತ) ಮಾಲಿನೀವೃತ್ತದಲ್ಲಿದೆ. ವೃತ್ತದಂತೆ ಪದ್ಯಸಂಖ್ಯೆಯಲ್ಲಿ, ಪ್ರಕೃತಿ ನಿರೂಪಣೆಯಲ್ಲಿ ಭಾವಾಭಿವ್ಯಕ್ತಿಯಲ್ಲಿ ಕಾಳಿದಾಸನ ಪ್ರಭಾವವನ್ನು ಎಲ್ಲೆಡೆಗೂ ನಿಚ್ಚಳವಾಗಿ ನೋಡಬಹುದು. ಜಿನಸೇನನಂತೂ ಕಾಳಿದಾಸನ ‘ಮೇಘಸಂದೇಶ’ದ ಒಂದೊಂದು ಸಾಲನ್ನೂ ಸಮಸ್ಯಾಪೂರಣಕ್ಕಾಗಿ ಬಳಸಿ ಕೊಂಡಿದ್ದಾನೆ. ಸ್ವಪ್ರತಿಭೆ ನಿರರ್ಗಳವಾಗಿ ಹರಿಯುವುದನ್ನು ನೋಡಬೇಕಾದರೆ ಅಮರುಕನ ಶೃಂಗಾರಶತಕವನ್ನು ಪರಿಶೀಲಿಸಬೇಕು. ಇಲ್ಲಿ ಶಬ್ದಾಡಂಬರಕ್ಕೆ ಎಡೆಯಿಲ್ಲ; ಉದ್ದುದ್ದ ಸಮಾಸಗಳಿಲ್ಲ. ಇರುವುದೆಲ್ಲ ಪರಿಶುದ್ಧ ಪ್ರೇಮದ ವಿವಿಧ ವಿನ್ಯಾಸ, ಅಮರುಕನ ಕೃತಿ ಕೊಡದಲ್ಲಿ ಶೃಂಗಾರದ ಕಡಲನ್ನೇ ತುಂಬಿಟ್ಟಂತಿದೆ. ಕಾಮಿನಿಯರ ವಿಭಿನ್ನ ಮನೋವೃತ್ತಿಗಳನ್ನು ಒಮ್ಮೆ ‘ವಿರಹೋತ್ಕಂಠಿತೆ’, ಒಮ್ಮೆ ‘ಪ್ರಣಯ ಕುಪಿತೆ’, ಒಮ್ಮೆ ‘ಖಂಡಿತೆ’, ಒಮ್ಮೆ ‘ಪ್ರಸನ್ನೆ’ ಹೀಗೆ ಕವಿಪ್ರತಿಭೆ ಸೂಕ್ಷ್ಮವಾಗಿ ಗ್ರಹಿಸಿ ಸುಂದರವಾಗಿ ಸರಳ ಶಬ್ದಗಳಲ್ಲಿ ಮೂಡಿಸುತ್ತದೆ. ಈ ಪದ್ಯಗಳಲ್ಲಿ ಒಂದೊಂದು ಒಂದು ಮಹಾಪ್ರಬಂಧದ ತೂಕವನ್ನು ಪಡೆದಿದೆಯೆಂಬುದು ಪ್ರಾಚೀನ ಸಹೃದಯರ ಪ್ರಶಂಸೆ. ಭರ್ತೃಹರಿಯ ಶತಕಗಳಲ್ಲಿ ಇಷ್ಟು ಕುಸುರಿ ಕೆಲಸವಿಲ್ಲ. ನೆಳಲು ಬಿಸಿಲುಗಳಂತೆ ಶೃಂಗಾರ ಶಾಂತಗಳು ಬದಲಾಗುತ್ತ ಹೋಗುವುದು ಅಲ್ಲಿಯ ವಿಶೇಷ. ಒಮ್ಮೆ ಸ್ತ್ರೀಪ್ರಶಂಸೆ, ಮತ್ತೊಮ್ಮೆ ಸ್ತ್ರೀನಿಂದೆ ಎರಡು ಭಾವಗಳಿಗೂ ಅಲ್ಲಿ ಪ್ರವೇಶವುಂಟು. ರಕ್ತಿ-ವಿರಕ್ತಿಗಳೆರಡನ್ನೂ ಸಮರ್ಥವಾಗಿ ಬಿಂಬಿಸುವ ಕಾವ್ಯಧಾರೆ ಭರ್ತೃಹರಿಯದು. ಅವನ ವೈರಾಗ್ಯಶತಕವನ್ನು ಮೆಚ್ಚದ ರಸಿಕನೇ ಇಲ್ಲವೆಂದರೂ ಸಲ್ಲುತ್ತದೆ. ನೀತಿಶತಕವಂತೂ ಜನತೆಯ ಬಾಯಲ್ಲಿ ಇಂದಿಗೂ ಜೀವಂತವಿದೆ. ಹೀಗೆ ಲಘುಕಾವ್ಯಕಾರರಲ್ಲಿ ಭರ್ತೃಹರಿಯನ್ನು ಜನತೆಯ ಕವಿಯೆನ್ನಬಹುದು. 

ಇದೇ ಸಂದರ್ಭದಲ್ಲಿ ಉಲ್ಲೇಖಯೋಗ್ಯವಾದ, ಜನಪ್ರಿಯವಾದ ಮತ್ತೊಂದು ಕೃತಿ ‘ಚೋರಪಂಚಾಶಿಕಾ’. ಇದರ ಕವಿ ‘ಚೋರ’ನೋ ಬಿಲ್ಹಣನೋ (ಸು. 1100) ಸಂದೇಹವಿದೆ. ತನ್ನ  ಪ್ರಣಯಲೋಕದಲ್ಲಿ ಮೈಮರೆತ ಕವಿ  ಐವತ್ತು  ವಸಂತ ತಿಲಕಾವೃತ್ತಗಳಲ್ಲಿ  ಶೃಂಗಾರವನ್ನು ಕೋಡಿಹರಿಸಿದ್ದಾನೆ. ಇದರ ಬಗೆಗೆ ಅನೇಕ ದಂತಕಥೆಗಳು ಹುಟ್ಟಿವೆ. ರಾಜಪುತ್ರಿಯನ್ನು ರಮಿಸಿದ ಅಪರಾಧಕ್ಕಾಗಿ ವಧ್ಯಸ್ಥಾನಕ್ಕೆ ಒಯ್ಯಲ್ಪಡುವಾಗ ಈ ಪದ್ಯಗಳನ್ನು ರಚಿಸಿದ ಕವಿ ರಾಜನ ಕ್ಷಮೆ ಪಡೆದನಂತೆ. ಶೃಂಗಾರಕಾವ್ಯದ ಸಂಪ್ರದಾಯ 17ನೆಯ ಶತಮಾನದ ತನಕ ಪ್ರವರ್ಧ ಮಾನವಾಗಿದ್ದುದನ್ನು ತೋರಿಸಲು ಚಮತ್ಕಾರಪೂರ್ಣವಾದ ‘ಭಾಮಿನೀ ವಿಲಾಸ’ ಸಾಕ್ಷಿಯಾಗಿದೆ. ಪಂಡಿತರಾಜನೆಂದು ಪ್ರಸಿದ್ಧನಾದ ಜಗನ್ನಾಥನ ಕೃತಿಯಿದು. ಇದರಲ್ಲಿ ಭಾವಸಹಜತೆಗಿಂತ ಹೆಚ್ಚಾಗಿ ಅಲಂಕಾರಗಳ ಚಮತ್ಕಾರ ಕೋರೈಸುವಂತಿದೆ. ಈ ಸಂಕಲನದಲ್ಲಿ ಶೃಂಗಾರಪದ್ಯಗಳಲ್ಲದೆ ಅನ್ಯೋಕ್ತಿಗಳೂ ಕರುಣ, ಶಾಂತರಸಗಳನ್ನು ಪ್ರತಿಪಾದಿಸುವ ಪದ್ಯಗಳೂ ಸೇರಿವೆ. 

ಜಯದೇವ (ಸು.12ನೆಯ ಶತಮಾನ) ಸಂಸ್ಕೃತ ಗೀತಕಾವ್ಯದಲ್ಲಿ ನವಸಂಪ್ರದಾಯದ ಪ್ರವರ್ತಕ. ಆತನ ಕೃತಿರತ್ನ ‘ಗೀತಗೋವಿಂದ’. ಯಮುನಾತೀರದಲ್ಲಿ ವಿಹರಿಸುವ ರಾಧಾಮಾಧವರ ಲೀಲಾವಿಲಾಸಗಳನ್ನು ರಾಗ ತಾಳಗಳಿಗೆ ಅಳವಡುವ ಅಷ್ಟಪದಿ ಹಾಡುಗಳಲ್ಲಿಯೂ ಪ್ರಕೃತಿ ವರ್ಣನೆಗೆ ಪೋಷಕವಾದ ವೃತ್ತಗಳಲ್ಲಿಯೂ ಕವಿ ಬಣ್ಣಿಸಿದ್ದಾನೆ. ಸಂಗೀತ-ಸಾಹಿತ್ಯ, ಸೌಂದರ್ಯ-ಮಾಧುರ್ಯ, ಭಕ್ತಿ-ಶೃಂಗಾರಗಳ ಹೃದಯಂಗಮ ಸಂಗಮಕ್ಕೆ ಈ ಕಾವ್ಯ ಅದ್ವಿತೀಯವಾಗಿದೆ. 
ಸಂಸ್ಕೃತದಲ್ಲಿ ವಿಡಂಬನಕಾವ್ಯಗಳ ಸಂಖ್ಯೆ ಸಣ್ಣದಾದರೂ ದಾಮೋದರ ಗುಪ್ತನ ‘ಕುಟ್ಟನೀ ಮತ’ (8ನೆಯ ಶತಮಾನ), ಕ್ಷೇಮೇಂದ್ರನ ‘ದೇಶೋ ಪದೇಶ’ (11ನೆಯ ಶತಮಾನ), ‘ನರ್ಮಮಾಲಾ’, ‘ದರ್ಪದಲನ’ ‘ಸಮಯಮಾತೃಕಾ’ ಮತ್ತು ‘ಕಲಾವಿಲಾಸ’ ಎಂಬ ರಚನೆಗಳು ಗಮನಾ ರ್ಹವಾಗಿವೆ. ಜನರ ಡಂಭಾಚಾರಗಳನ್ನೂ ಸಾಮಾಜಿಕ ಲೋಪದೋಷ ಗಳನ್ನೂ ಮಾರ್ಮಿಕವಾಗಿ ಈ ಕಾವ್ಯಗಳು ಬಯಲಿಗೆಳೆದು ವಿವೇಕವನ್ನು ಪರ್ಯಾಯವಾಗಿ ಬೋಧಿಸುತ್ತವೆ. ನೀಲಕಂಠ ದೀಕ್ಷಿತನ (17ನೆಯ ಶತಮಾನ) ‘ಕಲಿ ವಿಡಂಬನ’ವೂ ಇದೇ ಗುಂಪಿಗೆ ಸೇರುತ್ತದೆ. 

ವಿಡಂಬನೆಯಂತೆ, ಅಸಹನೆ, ಗರ್ವ, ದೈನ್ಯ ಮುಂತಾದ ಅನೇಕ ಭಾವಗಳ ಪ್ರಕಟಣೆಗೆ ಮುಕ್ತ ಕವಿಗಳಿಗೆ ಮೆಚ್ಚಾದ ಪರಂಪರೆಯೆಂದರೆ ‘ಅನ್ಯೋಕ್ತಿ’. ಇಂಥ ನೂರಾರು ಪದ್ಯಗಳು ಸುಭಾಷಿತ ಸಂಗ್ರಹಗಳಲ್ಲಿ ಸಿಕ್ಕುತ್ತವೆ. ಇಲ್ಲಿ ಕವಿ ವ್ಯಂಗ್ಯವಾಗಿ ತನ್ನ ಭಾವವನ್ನು ಪ್ರಕಟಿಸುತ್ತಾನೆ. ವಾಚ್ಯವಾಗಿ ಅವನು ಮೃಗಪಕ್ಷಿಗಳನ್ನು ಸಂಬೋಧಿಸುತ್ತಿದ್ದರೂ ಗೂಢತಾತ್ಪರ್ಯ ಬೇರೆ ಇರುತ್ತದೆ. 

ಪುರಾಣಗಳಲ್ಲೂ ಆರ್ಷಕಾವ್ಯಗಳಲ್ಲೂ ಅಲ್ಲಲ್ಲಿ ಬರುವ ಭಕ್ತಿಸ್ತೋತ್ರಗಳು ಮುಂದಿನ ಕವಿಗಳ, ಆಚಾರ್ಯರ ಕೈಯಲ್ಲಿ ಹೊಸ ಸಂಪ್ರದಾಯ ವೆನಿಸುವಂತೆ ಪರಿಷ್ಕಾರಗೊಂಡವು; ಸನಾತನಿಗಳಂತೆ ಜೈನ, ಬೌದ್ಧ ಕವಿಗಳಿಂದಲೂ ಕೃಷಿಗೊಂಡವು. ವಿಪುಲವಾಗಿ ಬೆಳೆದು ಜನರ ನಿತ್ಯ ಅನುಷ್ಠಾನದಲ್ಲಿ ಸ್ಥಾನವನ್ನು ಗಳಿಸಿಕೊಂಡವು. ಇವುಗಳಲ್ಲಿ ವಿದ್ವತ್ಕವಿಗಳಾದ, ಶಬ್ದಚಮತ್ಕಾರಪ್ರಿಯರಾದ ಬಾಣ, ಮಯೂರ ಮುಂತಾದವರ ಚಂಡೀಶತಲ, ಸೂರ್ಯಶತಕ ಇತ್ಯಾದಿಗಳಲ್ಲಿ ಭಕ್ತಿಯ ಅಭಿವ್ಯಕ್ತಿಗಿಂತ ಕಾವ್ಯಗುಣದ ದೇದೀಪ್ತಿಯೇ ಹೆಚ್ಚು. ಆದರೆ ಶಂಕರಾಚಾರ್ಯ, ವೇದಾಂತದೇಶಿಕ, ಮಧ್ವಾಚಾರ್ಯರಂಥ ಮಹಾತ್ಮರ ಸ್ತೋತ್ರಗಳಲ್ಲಿ ತತ್ತ್ವಬೋಧೆ, ನೀತಿ ನಿರೂಪಣೆ, ಭಕ್ತಿಪ್ರಕಟಣೆಗಳು ಮುಪ್ಪುರಿಯಾಗಿ ಸರಳ ಸುಭಗ ಛಂದೋಬಂಧಗಳಲ್ಲಿ ಮೈದಾಳುತ್ತವೆ; ಜನರ ಮನಸ್ಸನ್ನು ಕರಗಿಸುತ್ತವೆ; ಭಗವಂತನ ಮಹಿಮೆಯನ್ನು ಬಣ್ಣಿಸುತ್ತವೆ. ‘ಭಜ ಗೋವಿಂದಂ...........’ ಮುಂತಾದ ಆಡುಮಾತುಗಳಲ್ಲಿಯೇ ಪಾಠಕನನ್ನು ಮೇಲೆತ್ತಿ ಆನಂದಮಯಕ್ಕೆ ಒಯ್ಯುತ್ತವೆ. ‘ಸೌಂದರ್ಯಲಹರಿ’ಯಲ್ಲಿ ಭಗವತಿಯ ವರ್ಣನೆಯಂತೆ ತಂತ್ರಶಾಸ್ತ್ರ ರಹಸ್ಯವೂ ಪ್ರತಿಶಾಸ್ತ್ರರಹಸ್ಯವೂ ಪ್ರತಿಪಾದ್ಯ ವಿಷಯ. ಪುಷ್ಪದಂತನ ಮಹಿಮ್ನಸ್ತೋತ್ರದಲ್ಲಿ ದಾರ್ಶನಿಕ ತತ್ತ್ವಗಳೂ ಕವಿವಾಣಿಯಿಂದ ವಿವರಿಸಲ್ಪಟ್ಟಿವೆ. ಇಷ್ಟದೇವತೆಗಳ ಶೃಂಗಾರಾದಿ ಭಾವಗಳನ್ನು ತನ್ಮಯತೆಯಿಂದ ವರ್ಣಿಸುವ ಮೂರನೆಯ ಸ್ತೋತ್ರಮಾರ್ಗ ಲೀಲಾಶುಕನದು. ಚೈತನ್ಯ ಪ್ರಭುಗಳಿಗೆ ಈತನ ಕೃಷ್ಣಕ ರ್ಣಾಮೃತ ಪರಮಪ್ರಿಯವಾಗಿತ್ತಂತೆ. ಕುಲಶೇಖರನ ಮುಕುಂದಮಾಲಾ, ವೇದಾಂತದೇಶಿಕರ ಪಾದುಕಾ ಸಹಸ್ರ-ಇವು ಜನಪ್ರಿಯವಾದ ಸ್ತೋತ್ರಗಳು. ಮತ್ತೆ 17ನೆಯ ಶತಮಾನದಲ್ಲಿ ಪಂಡಿತ ಕವಿಗಳ ಪ್ರಾಶಸ್ತ್ಯದ ಪರಿಣಾಮ ವಾಗಿ ಶ್ಲೇಷ ಯಮಕಚಾತುರ್ಯವನ್ನು ಮೆರೆಯುವ ವೆಂಕಟಾಧ್ವರಿಯ ಲಕ್ಷ್ಮೀ ಸಹಸ್ರ, ಜಗನ್ನಾಥಪಂಡಿತನ ಗಂಗಾಲಹರೀ ಇತ್ಯಾದಿ ಸ್ತೋತ್ರಗಳು ರಚಿತವಾದುವು. ಜೈನಕವಿ ವಾದಿರಾಜನ ಏಕೀಭಾವಸ್ತೋತ್ರ, ಬೌದ್ಧಕವಿ ನಾಗಾರ್ಜುನನ ಚತುಃಸ್ತವ-ಇವು ಪ್ರಸಿದ್ಧ ಕೃತಿಗಳು.	
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ